ಭಾನುವಾರ, ಅಕ್ಟೋಬರ್ 11, 2020

ಗಮ್ಯ

 ಪುಟ್ಟ ಪುಟ್ಟ ಮೋಡಗಳು ಚಲಿಸುತ್ತವೆ.. 

ಗಗನವಿಡೀ ವಿಹರಿಸಲಾಗದಿದ್ದರೂ ಕೈ ಚೆಲ್ಲಿ ನಿಂತಿಲ್ಲ.. ನಿರಂತರತೆ..  ಗುರಿ ಸೇರುವ ತವಕವ ಹೊತ್ತು ಸಾಗುತ್ತಿವೆ...

 ಆದರೆ ನನಗೇಕೆ ಚಲಿಸಲಾಗುತ್ತಿಲ್ಲ... 

ನನಗೆ ಗಮ್ಯದ ಅರಿವಿಲ್ಲವೇ!!!!??  

ಪ್ರಯತ್ನಿಸದೇ  ಕೈ ಕಟ್ಟಿ  ನಿಂತಿರುವೆನಾ....!!!??? 

ನನಗೇಕೊ  ಭಾಸವಾಗುತ್ತಿದೆ,

ನಾನು ಗಮ್ಯದ ಅಂತಿಮ ದಾರಿಯಲ್ಲಿ ನಿಂತಿರುವೆನೆಂದು...

ಮುಂದೆ ದಾರಿಯಿಲ್ಲ...

ಹಿಂದಿರುಗಿ ಹೋಗುವಂತಿಲ್ಲ..!!

ಸಿಕ್ಕಿರುವ ಗಮ್ಯವೇ ನನ್ನವೆಂದು ಎಷ್ಟೇ ಪ್ರಯತ್ನಿಸಿದರೂ ಒಪ್ಪಲಾಗುತ್ತಿಲ್ಲ...

ಮನವೇಕೋ ಹಟ ಹಿಡಿದಂತಿದೆ...

ಹಿಂದಿರುಗಲಾಗದ ಅಂತಿಮ ಗಮ್ಯದೆದುರು ಸೋಲೊಪ್ಪದ ಮನಕೆ  ಸಮಾಧಾನಿಸಲಾಗುತ್ತಿಲ್ಲ.. 

ಈ ಉಸಿರಿನ ಕೊನೆತನಕ ಪ್ರಕೃತಿಯ ಮಡಿಲಲ್ಲಿ 

ತಣ್ಣನೆ ಮಲಗೆಂದು...


ಸೋಮವಾರ, ಜೂನ್ 15, 2020



ನಿನ್ನ ಬಿಸಿಯುಸಿರು ದಿನವೂ ನನ್ನ  ಕದಪುಗಳಿಗೆ
ಸೋಕಲೆಂಬ ನನ್ನ ಬಯಕೆಯ ಹತ್ತಿಕ್ಕಿ ಮಗ್ಗುಲು ಬದಲಾಯಿಸಿ ಮಲಗುವಾಗ ಮನದಲೆನೊ ಅವ್ಯಕ್ತ ಭಾವದ ಹಾಜರೀ...
ನಿನ್ನೆದೆಗೆ ತಲೆಯಾನಿಸಿ ಮಲಗಿ ನಿನ್ನ ಎದೆ ಬಡಿತವ ಕೇಳುವ ಹಂಬಲವಾದರೂ ನಿನ್ನ ದಿವ್ಯ ಮೌನದಲಿ ನನ್ನಾಸೆಗೆ ಜೀವ ನೀಡಲಾಗದ ಹತಾಶ ಭಾವ ಮನದಲಿ...

ನನ್ನ ಮೌನದಲಿ ನಿನ್ನ ಭಾವನೆಗಳೆಷ್ಟೊ,
ಕನಸುಗಳೇಷ್ಟೊ , ಒಲವ ಒರತೆಗಳೇಷ್ಟೊ ,
ಹತ್ತಿಕ್ಕಲಾಗದ ನಿನ್ನ ತುಂಟತನಗಳೇಷ್ಟೊ ಬಣ್ಣ ಕಳೆದುಕೊಂಡದ್ದು  ಗುರುತಿಸಲಾರದ ಭಾವ    ನನ್ನಲ್ಲಿ...
ನಿನ್ನೆದೆಯಲಿ ಹುದುಗಿಸಿ ನನ್ನ ಮಂದಲೆಗೆ ಮುತ್ತಿಕ್ಕುವ  ಉತ್ಕಟತೆಯ ಹತ್ತಿಕ್ಕಿದ
ನಿನ್ನ ನಿಟ್ಟುಸಿರು ನನಗೇನೊ ಹೇಳಲು ಕಾತರಿಸಿದಂತಿತ್ತು...

ಬದುಕಿನ ತುಂಬೆಲ್ಲ ಎಂದೂ ಸಂತಸದ ಹೊನಲೆ ಹರಿಯುತ್ತಿದ್ದರೆ ಬಹೂಷ್ಹ ಖುಷಿಯ ಭಾವಕ್ಕೆ 
ಅರ್ಥವಿರುತ್ತಿರಲಿಕ್ಕಿಲ್ಲ..
ಒಲವ ಒರತೆ ಬತ್ತುವವರೆಗೆ ಪ್ರೀತಿಯ ಸೆಳೆತದಿಂದ , ನೋವಿನ ಬಿಸಿಯುಸಿರಿಂದ , ಒಲವಿನ ಹಂಬಲಿಕೆಯಿಂದ ದೂರ ಸರಿಯಲಾಗದು...
ದೂರ ಸರಿಯಲಾಗದು....